ಚಿತ್ರದುರ್ಗ: ಉತ್ತಮ ವ್ಯಕ್ತಿತ್ವ ರೂಪಿಸಲು ಪುಸ್ತಕಗಳ ಪಾತ್ರ ಅಮೂಲ್ಯವಾದುದು ಎಂದು ಸರ್ಕಾರಿ ಕಲಾ ಕಾಲೇಜಿನ ಪ್ರಾಂಶುಪಾಲ ಡಾ.ಆರ್.ರಂಗಪ್ಪ ಹೇಳಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಿತ್ರದುರ್ಗ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಇವರ ಸಹಯೋಗದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಅಂಗವಾಗಿ ಅಮೃತ ಪುಸ್ತಕ ಮಾರಾಟ ಅಭಿಯಾನ ಮತ್ತು ಸಾಕ್ಷö್ಯಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪುಸ್ತಕ ಓದಿನ ಹವ್ಯಾಸ ರೂಢಿಸಿಕೊಂಡ ವ್ಯಕ್ತಿಗೆ ಪುಸ್ತಕ ಆತನ ಬದುಕಿನ ಅವಿಭಾಜ್ಯ ಅಂಗವಾಗುತ್ತದೆ. ಪುಸ್ತಕಗಳ ಅಧ್ಯಯನದಿಂದ ಜೀವನದಲ್ಲಿ ಲವಲವಿಕೆ ಮೂಡುವುದರ ಜೊತೆಗೆ ಜ್ಞಾನಾರ್ಜನೆಯನ್ನು ಹೆಚ್ಚಿಸುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸಮಗ್ರ ಪುಸ್ತಕಗಳು ಶೇ.50 ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯವಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಗುಡ್ಡದೇಶ್ವರಪ್ಪ ಸಾಕ್ಷö್ಯಚಿತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪುಸ್ತಕ ಪ್ರೇಮಿಗಳಾಗಬೇಕು. ಓದಿನಲ್ಲಿ ಸದಾ ಅಧ್ಯಯನಶೀಲರಾಗಬೇಕು. ಇದರಿಂದ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗಲಿದೆ. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಜ್ಞಾನಿಗಳಾಗಬೇಕು. ಓದಿನಿಂದ ಮದ, ಮತ್ಸರ, ಕೌರ್ಯ ಸರ್ವನಾಶವಾಗಲಿದ್ದು, ಓದಿನ ಹವ್ಯಾಸದಿಂದ ಪ್ರಬುದ್ಧತೆ ಬೆಳೆಯಲಿದೆ. ಹಾಗಾಗಿ ಪ್ರತಿಯೊಬ್ಬರು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಗೋಪಾಲಪ್ಪ ಮಾತನಾಡಿ, ಪುಸ್ತಕಗಳನ್ನು ಕೊಂಡು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ರೀಡರ್ ಇಸ್ ಲೀಡರ್ ಹಾಗಾಗಿ ಓದುವವರು ಸದಾ ಮುಂದೆ ಬರಲು ಸಾಧ್ಯ ಎಂದು ಹೇಳಿದರು.