ಹೊಸಪೇಟೆ: ವಿರೋಧಿ ಕೃಷಿ ಕಾಯ್ದೆಗಳನ್ನು ರಾಜ್ಯ ಸರಕಾರ ಹಿಂಪಡೆಯಲು ಆಗ್ರಹಿಸಿ ವಿಜಯನಗರ ಜಿಲ್ಲೆಯ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ಜಿಲ್ಲಾಧಿಕಚೇರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕರೆ ಹನುಮಂತ ಮಾತನಾಡಿ, ಕಾರ್ಪೊರೇಟ್ ಕಂಪನಿಗಳ ಹಿತ ರಕ್ಷಣೆ ಗಾಗಿ ಕೃಷಿಯನ್ನು ಖಾಸಗಿಯವರಿಗೆ ಒತ್ತೆ ಹಾಕುವ ಕೃಷಿ ಕಾಯ್ದೆಗಳನ್ನು ಕೇಂಧ್ರ ಸರಕಾರ ಕ್ಷಮೆಯಾಚಿಸಿ ಹಿಂಪಡೆದರೆ ಭಾಜಪ ನೇತೃತ್ವದ ರಾಜ್ಯ ಸರಕಾರಗಳು ಜಾರಿಗೆ ತರುಲು ಮುಂಗಾಲಲ್ಲಿ ನಿಂತಿರುವುದು ಅತ್ಯಂತ ಖಂಡನೀಯ. ಈ ಕಾಯ್ದೆಗಳು ಜಾರಿಯಾದರೆ ರೈತರ ಆತ್ಮಹತ್ಯೆಗಳು ಹೆಚ್ಚಳ ಗೊಳ್ಳುತ್ತವೆ. ಕೃಷಿ ಅವಲಂಬಿತ ಉಪ ಕಸುಬುದಾರರು ಬೀದಿಗೆ ಬೀಳಲಿದ್ದಾರೆ. ರಾಜ್ಯದಲ್ಲಿ ಹಲವಾರು ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ನರಳುತ್ತಿರುವ ಮಹಿಳೆಯರು ಮತ್ತು ಮಕ್ಕಳು ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತದೆ. ಕಾರಣ ರಾಜ್ಯ ಸರಕಾರ ತಕ್ಷಣ ಈ ಕಾಯ್ದೆಗಳನ್ನು ಹಿಂತೆಗೆಯಬೇಕು ಎಂದು ಆಗ್ರಹಿಸಿದರು.