ದೊಡ್ಡಬಳ್ಳಾಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದಿಟ್ಟ ನಿಲುವಿನಿಂದ 130 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಿದ್ದರೆ ನರಕಕ್ಕೆ ತಳ್ಳುತ್ತಿತ್ತು. ಮೊದಲು 30 ಕೆಜಿ ಅಕ್ಕಿ ಸಿಗುತ್ತಿತ್ತು. ಅದನ್ನು 4 ಕೆಜಿಗೆ ಇಳಿಸಿದಿರಿ ಇದರಲ್ಲಿ ಭ್ರಷ್ಟಾಚಾರ ನಡೆಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರೋಪಿಸಿದರು.
ದೊಡ್ಡಬಳ್ಳಾಪುರ.. ಬಿಜೆಪಿ ಜನ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ದುರಾಡಳಿತದ ಬಗ್ಗೆ ರಾಜ್ಯದ ಜನರು ಬೇಸತ್ತಿದ್ದಾರೆ. ಕಾಂಗ್ರೆಸ್ ನಾಟಕ ರಾಜ್ಯದಲ್ಲಿ ನಡೆಯುವುದಿಲ್ಲ. ಯಡಿಯೂರಪ್ಪ ಅವರ ನೇತೃತ್ವದ ಯೊಜನೆಗಳನ್ನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ ಎಂದು ಹೇಳಿದ ಅವರು ಹಲವು ಯೋಜನೆಗಳನ್ನು ಘೋಷಿಸಿದರು.
20 ಲಕ್ಷ ಮಕ್ಕಳಿಗೆ ವಿದ್ಯಾನಿಧಿ ಯೋಜನೆ. ರೈತರಿಗೆ ರೈತ ಶಕ್ತಿ ಯೋಜನೆ, ಯಶಸ್ವಿನಿ ಯೋಜನೆ, ಹಾಲು ಉತ್ಪಾದಕರಿಗೆ ಬ್ಯಾಂಕ್ ಸ್ಥಾಪನೆ. ಅದು ದೊಡ್ಸಬಳ್ಳಾಪುರ, ಚಿಕ್ಕಬಳ್ಳಾಪುರ ಭಾಗದ ಜನರಿಗೆ ಹೆಚ್ಚಿನ ಅನುಕೂಲ ಆಗಲಿದೆ, ಎಸ್ಸಿ ಎಸ್ಟಿ ವಿದ್ಯಾರ್ಥಿಗಳ ಸ್ಕಾಲರ್ ಶಿಪ್ ಹೆಚ್ಚಳ, ಬಿಪಿಎಲ್ ಕಾರ್ಡ್ ಹೊಂದಿರುವ ಎಸ್ಸಿ ಎಸ್ಟಿ ಕುಟುಂಬಗಳಿಗೆ 75 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಎಸ್ಸಿ ಎಸ್ಟಿ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ತರಬೇತಿ ನೀಡುತ್ತಿದ್ದೇವೆ ಎಂದು ಹೇಳಿದರು.
ಈಗಾಗಲೆ ಕೋಲಾರ, ಚಿಕ್ಕಬಳ್ಳಾಪುರ ಕೈಗಾರಿಕಾ ಟೌನ್ ಶಿಪ್ ಮಾಡಲು ತೀರ್ಮಾನ ಮಾಡಲಾಗಿದೆ. ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ 3 ನಗರಗಳನ್ನು ಸೆಟಲೈಟ್ ಟೌನ್ ಗಳಾಗಿ ಅಭಿವೃದ್ಧಿಪಡಿಸಲಾಗುವುದು. ನವ ಭಾರತ ನಿರ್ಮಾಣಕ್ಕಾಗಿ ನವ ಕರ್ನಾಟಕ ಮಾಡುವುದು ನಮ್ಮ ಗುರಿಯಾಗಿದೆ..
ನಾವು ದೊಡ್ಡಬಳ್ಳಾಪುರದಿಂದ ಜನಸ್ಪಂದನ ಯಾತ್ರೆಯನ್ನು ರಾಜ್ಯಾದ್ಯಂತ ನಡೆಸುತ್ತೇವೆ ತಾಕತ್ ಇದ್ದರೆ ನಮ್ಮ ಯಾತ್ರೆಯನ್ನು ನಿಲ್ಲಿಸಿ ನಿಮ್ಮ ಮಾತಿನಿಂದಲ್ಲ. ಇದು ಪ್ರಜಾಪ್ರಭುತ್ವ, ಜನರು ನಿರ್ಧಾರ ಮಾಡುತ್ತಾರೆ. ರಾಜ್ಯದಲ್ಲಿ ಪ್ರತಿ ಗ್ರಾಮಗಳಿಗೆ ಜನಸ್ಪಂದನ ಯಾತ್ರೆ ನಡೆಸುತ್ತೇವೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ನಮ್ಮ ಸಾಧನೆಗಳ ರಿಪೋರ್ಟ್ ಕಾರ್ಡ್ ತೋರಿಸಿ ನಿಮ್ಮ ಮುಂದೆ ಬಂದು ನಿಲ್ಲುತ್ತೇವೆ ಆಶೀರ್ವಾದ ಮಾಡಿ. ಈ ಜನಸ್ಪಂದನ ವಿಜಯೋತ್ಸವವನ್ನಾಗಿ ಮಾಡುತ್ತೇವೆ. ನನ್ನ ಅದಮ್ಯ ಶಕ್ತಿಯನ್ನು ಇಮ್ಮಡಿಗೊಳಿಸಿ ಪಕ್ಷ ಅಧಿಕಾರಕ್ಕೆ ತರಲು ಹೊರಡುತ್ತಿದ್ದೇನೆ ಎಂದು ಹೇಳಿದರು.