ಚಿತ್ರದುರ್ಗ: ಜಿಲ್ಲೆಯಲ್ಲಿ 8 ಸಾವಿರ ಮಂದಿ ದೈಹಿಕ ಅಂಗವಿಕಲರಿದ್ದು, ದೈಹಿಕ ವಿಕಲಚೇತನರೆಲ್ಲರಿಗೂ ದ್ವಿಚಕ್ರ ವಾಹನ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಹೇಳಿದರು
ಮೊಳಕಾಲ್ಮುರು ಪಟ್ಟಣದಲ್ಲಿ ಸೋಮವಾರ ಡಿಎಂಎಫ್ ಅನುದಾನದಲ್ಲಿ ಅಂಗವಿಕಲರಿಗೆ 100 ದ್ವಿಚಕ್ರ ವಾಹನ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸುಮಾರು 35 ಸಾವಿರ ವಿಕಲಚೇತನರಿದ್ದು, ಎಲ್ಲ ವಿಕಲಚೇತನರಿಗೂ ಸರ್ಕಾರದ ವತಿಯಿಂದ ವಿವಿಧ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ದ್ವಿಚಕ್ರ ವಾಹನ ನೀಡುವಂತೆ ಅನೇಕ ವಿಕಲಚೇತನರು ಮನವಿ ಮಾಡಿದ ಮೇರೆಗೆ ಅಂಗವಿಕಲರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ಡಿಎಂಎಫ್ ನಿಧಿಯಿಂದ ಜಿಲ್ಲೆಯ ಅಂಗವಿಕಲರಿಗೆ 600 ದ್ವಿಚಕ್ರ ವಾಹನ ವಿತರಿಸಲು ಕ್ರಮಕೈಗೊಳ್ಳಲಾಗಿದೆ. ಇದರ ಜೊತೆಗೆ ಶಾಸಕರ ಅನುದಾನದಲ್ಲಿಯೂ ಉಳಿದ ವಿಕಲಚೇತನರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಲಾಗುವುದು ಎಂದು ಭರವಸೆ ನೀಡಿದರು.
ವಿಕಲಚೇತನರಿಗೆ ವಿತರಿಸಿರುವ ದ್ವಿಚಕ್ರ ವಾಹನವನ್ನು ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಿಕೊಳ್ಳಬಾರದು. ವಾಹನವನ್ನು ಸದಾ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು ಎಂದು ಸಚಿವರು ಸಲಹೆ ನೀಡಿದರು.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಶೇ.45ರ ಮೇಲ್ಪಟ್ಟ ಹಾಗೂ ಶೇ.75ರೊಳಗಿನ ಅಂಗವಿಕಲತೆ ಹೊಂದಿರುವ ಅಂಗವಿಕಲರಿಗೆ ರಾಜ್ಯ ಸರ್ಕಾರ ರೂ.600 ರಿಂದ ರೂ.800 ರೂಪಾಯಿಗೆ ಹೆಚ್ಚಳ ಮಾಡಿ ಮಾಸಾಶನ ನೀಡಲಾಗುತ್ತಿದೆ. ಸಂಧ್ಯಾ ಸುರಕ್ಷಾ ಯೋಜನಾ ಫಲಾನುಭವಿಗಳಿಗೆ ರೂ.200 ಹೆಚ್ಚಳ ಮಾಡಿ ರೂ.1200 ಮಾಸಾಶನ ನೀಡುತ್ತಿದ್ದಾರೆ ಎಂದರು.