ಕೊಪ್ಪಳ: ನಿರೀಕ್ಷೆಗೂ ಮುನ್ನವೇ ಈ ಬಾರಿ ತುಂಗಭದ್ರಾ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಪ್ರಸಕ್ತ ವರ್ಷ ರೈತರಿಗೆ ಎರಡೂ ಹಂಗಾಮಿಗೂ ನೀರಿನ ಕೊರತೆಯಾಗದೆ ಸಮರ್ಪಕವಾಗಿ ಲಭ್ಯವಾಗುವ ಎಲ್ಲ ಸಾಧ್ಯತೆಗಳಿವೆ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಹಾಗೂ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತç ಸಚಿವ ಆನಂದ್ ಸಿಂಗ್ ಅವರು ಹೇಳಿದರು.
ಸಂಪೂರ್ಣ ಭರ್ತಿಯಾಗಿರುವ ತುಂಗಭದ್ರಾ ಜಲಾಶಯಕ್ಕೆ ಗುರುವಾರದಂದು ಬಾಗಿನ ಸಮರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕೊಪ್ಪಳ, ವಿಜಯನಗರ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ, ಸುಮಾರು 40 ವರ್ಷದ ಬಳಿಕ ಇದೇ ಮೊದಲ ಬಾರಿಗೆ ಜುಲೈ ತಿಂಗಳಿನಲ್ಲಿಯೇ ಅಂದರೆ ಅವಧಿಗೂ ಮುನ್ನವೇ ಭರ್ತಿಯಾಗಿದ್ದು, ರೈತರು, ಜನಪ್ರತಿನಿಧಿಗಳು ಹಾಗೂ ಈ ಭಾಗದ ಜನರಲ್ಲಿ ಹರ್ಷವನ್ನು ಉಂಟುಮಾಡಿದೆ. ನಮ್ಮ ಸಂಸ್ಕೃತಿಯoತೆ ಗಂಗಾ ಮಾತೆಗೆ ಪೂಜೆ ಸಲ್ಲಿಸಿ, ಬಾಗಿನ ಸಮರ್ಪಿಸಲು ಸಂತಸವಾಗುತ್ತಿದೆ. ಬರುವ ದಿನಗಳಲ್ಲಿ ರೈತರಿಗೆ ಇದೇ ರೀತಿ ಸುಖ ಸಮೃದ್ಧಿಯನ್ನು ತರಲಿ ಎಂದು ಆಶಿಸುತ್ತೇನೆ. ತುಂಗಭದ್ರೆ ಉಗ್ರವಾಗಿ ಹರಿಯದೆ, ಶಾಂತಯುತವಾಗಿ ಹರಿದು, ನದಿ ದಂಡೆಯಲ್ಲಿರುವ ಜನರಿಗೆ, ರೈತರಿಗೆ ಯಾವುದೇ ತೊಂದರೆ ಉಂಟು ಮಾಡುವುದು ಬೇಡ ಎಂದು ಪ್ರಾರ್ಥಿಸುತ್ತೇನೆ. ಪ್ರತಿ ವರ್ಷವೂ ಇದೇ ರೀತಿ ತುಂಗಭದ್ರೆ ತುಂಬಿ ತುಳುಕಲಿ ಎಂದು ಹಂಪಿ ವಿರೂಪಾಕ್ಷನಿಗೆ ಬೇಡಿಕೊಳ್ಳುತ್ತೇನೆ. ಈ ಬಾರಿ ಎರಡೂ ಹಂಗಾಮಿಗೂ ರೈತರಿಗೆ ತುಂಗಭದ್ರೆ ನೀರು ಸಮರ್ಪಕವಾಗಿ ಲಭ್ಯವಾಗುವ ಎಲ್ಲ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.
ಹನುಮನುದಿಸಿದ ನಾಡು ಅಂಜನಾದ್ರಿ ಬೆಟ್ಟ ಪ್ರದೇಶ ಅಭಿವೃದ್ಧಿಗೆ ಈಗಾಗಲೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ಕೈಗೊಂಡು, ಹಲವು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. 60 ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆದು, ಪ್ರವಾಸಿಗರಿಗೆ, ಭಕ್ತಾದಿಗಳಿಗೆ, ಯಾತ್ರಾರ್ಥಿಗಳಿಗೆ ತಂಗಲು, ಅಡುಗೆ ತಯಾರಿಕೆ, ವಾಹನ ಪಾರ್ಕಿಂಗ್ ಮುಂತಾದ ಮೂಲಭೂತ ಸೌಕರ್ಯ ಕಲ್ಪಿಸುವ ಕಾರ್ಯಗಳಿಗೆ ಯೋಜನೆ ರೂಪಿಸಲಾಗಿದೆ. ಮುಖ್ಯಮಂತ್ರಿಗಳು ಇದೇ ತಿಂಗಳು ಅಂಜನಾದ್ರಿ ಬೆಟ್ಟಕ್ಕೆ ಆಗಮಿಸಲಿದ್ದು, ವೈಮಾನಿಕ ಸಮೀಕ್ಷೆ ನಡೆಸುವರು. ಈ ಅವಧಿಯೊಳಗೆ ಅಭಿವೃದ್ಧಿ ಯೋಜನೆಗಳಿಗೆ ಸಂಬoಧಿಸಿದ ಸಂಪೂರ್ಣ ನೀಲನಕ್ಷೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವ ಆನಂದ್ ಸಿಂಗ್ ಅವರು ಹೇಳಿದರು.