ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಕಾಮನ್ವೆಲ್ತ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತಕ್ಕೆ ಪ್ಯಾರಾ-ಪವರ್ಲಿಫ್ಟಿಂಗ್ನಲ್ಲಿ ಚಿನ್ನದ ಪದಕ ಬಂದಿದೆ. ಭಾರತದ ಪ್ಯಾರಾ-ಪವರ್ಲಿಫ್ಟರ್ ಸುಧೀರ್ ಆಗಸ್ಟ್ 4 ರಂದು ಕಾಮನ್ವೆಲ್ತ್ ಗೇಮ್ಸ್ 2022ರಲ್ಲಿ ಪುರುಷರ ಹೆವಿವೇಟ್ ಫೈನಲ್ನಲ್ಲಿ 212 ಕೆಜಿ ಅತ್ಯುತ್ತಮ ತೂಕದೊಂದಿಗೆ ಚಿನ್ನದ ಪದಕಕ್ಕೆ ಕೊರೊಳೊಡ್ಡಿದರು.
ಭಾರತದ ಸುಧೀರ್ ಪುರುಷರ ಹೆವಿವೇಯ್ಟ್ ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಐತಿಹಾಸಿಕ ಚಿನ್ನದ ಪದಕವನ್ನು ಗೆದ್ದರು ಮತ್ತು ಒಟ್ಟು 134.5 ಅಂಕಗಳೊಂದಿಗೆ ಕಾಮನ್ವೆಲ್ತ್ ಕ್ರೀಡಾಕೂಟದ ದಾಖಲೆಯನ್ನು ಸಹ ಬರೆದಿದ್ದಾರೆ. ಸುಧೀರ್ ತನ್ನ ಮೊದಲ ಪ್ರಯತ್ನದಲ್ಲಿ 208 ಕೆಜಿ ಎತ್ತಿದರು ಮತ್ತು ನಂತರ 212 ಕೆಜಿ ಎತ್ತುವ ಮೂಲಕ ಬೃಹತ್ ಮುನ್ನಡೆ ಸಾಧಿಸಿದರು.
ಪ್ಯಾರಾ-ಪವರ್ಲಿಫ್ಟಿಂಗ್ನಲ್ಲಿ ಭಾರತಕ್ಕೆ ಮೊದಲ ಚಿನ್ನ
ಸುಧೀರ್ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪ್ಯಾರಾ-ಪವರ್ಲಿಫ್ಟಿಂಗ್ನಲ್ಲಿ ಭಾರತಕ್ಕೆ ಮೊದಲ ಚಿನ್ನ ಗೆದ್ದು ಕೊಟ್ಟರು. ಅವರು ನೈಜೀರಿಯಾದ ಇಕೆಚುಕ್ವು ಒಬಿಚುಕ್ವು (133.6 ಅಂಕಗಳು) ಅವರನ್ನು 0.9 ಅಂಕಗಳಿಂದ ಸೋಲಿಸಿದರು. ಏಕೆಂದರೆ ಅವರ ಅಂತಿಮ ಸ್ಕೋರ್ ಚಿನ್ನಕ್ಕಾಗಿ 134.5 ಪಾಯಿಂಟ್ಗಳ ದಾಖಲೆಯನ್ನು ಬರೆದಿತ್ತು.
ಸುಧೀರ್ 208 ಕೆಜಿ ಎತ್ತುವ ಯಶಸ್ವಿ ಮೊದಲ ಪ್ರಯತ್ನದೊಂದಿಗೆ 132.0 ಅಂಕಗಳನ್ನು ಗಳಿಸಿದರು. ತನ್ನ ಎರಡನೇ ಪ್ರಯತ್ನದಲ್ಲಿ ಅವರು ತಮ್ಮ ಕೊನೆಯ ಪ್ರಯತ್ನವನ್ನು ಮತ್ತಷ್ಟು ಸುಧಾರಿಸಿದರು ಮತ್ತು 134.5 ಅಂಕಗಳನ್ನು ಗಳಿಸುವ ಮೂಲಕ 212 ಕೆಜಿಯನ್ನು ಯಶಸ್ವಿಯಾಗಿ ಎತ್ತಿದರು. ಮೂರನೇ ಮತ್ತು ಕೊನೆಯ ಪ್ರಯತ್ನದಲ್ಲಿ ಅವರು 217 ಕೆಜಿ ಎತ್ತುವಲ್ಲಿ ವಿಫಲರಾದರೂ, 134.5 ದಾಖಲೆಯ ಅಂಕಗಳೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.