1021 ದಿನಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಸಾವಿರ ದಿನಗಳ ಸುದೀರ್ಘ ಅವಧಿಯ ನಂತರ ವಿರಾಟ್ ಕೊಹ್ಲಿ ಶತಕ ದಾಖಲಿಸಿದ್ದಾರೆ. 71ನೇ ಶತಕ ಗಳಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಏಷ್ಯಾಕಪ್ ಸೂಪರ್ 4 ಹಂತದ ಅಫ್ಘಾನಿಸ್ತಾನದ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಅಬ್ಬರಿಸಿದರು.
ನಿಧಾನ ಗತಿಯಿಂದಲೇ ಇನ್ನಿಂಗ್ಸ್ ಆರಂಭಿಸಿದ ಕೊಹ್ಲಿ ನಂತರ ಭರ್ಜರಿ ಬೌಂಡರಿ, ಸಿಕ್ಸರ್ ಬಾರಿಸಿದರು. 61 ಎಸೆತಗಳನ್ನು ಎದುರಿಸಿದ ವಿರಾಟ್ ಕೊಹ್ಲಿ 12 ಬೌಂಡರಿ, 6 ಭರ್ಜರಿ ಸಿಕ್ಸರ್ ಸಹಿತ 122 ರನ್ ಗಳಿಸಿದರು. 200 ಸ್ಟ್ರೈಕ್ ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ್ದು, ವಿಶ್ವಕಪ್ ಸನಿಹವಾಗುತ್ತಿರುವ ಸಂದರ್ಭದಲ್ಲಿ ಅವರ ಶತಕ ಟೀಂ ಇಂಡಿಯಾ ಪಾಲಿಗೆ ಭಾರಿ ಮಹತ್ವದ್ದಾಗಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 71ನೇ ಶತಕ ದಾಖಲಿಸುವ ಮೂಲಕ ರಿಕಿ ಪಾಂಟಿಂಗ್ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ. 104ನೇ ಅಂತಾರಾಷ್ಟ್ರೀಯ ಟಿ20 ಪಂದ್ಯವನ್ನಾಡಿರುವ ವಿರಾಟ್ ಕೊಹ್ಲಿ 3584 ರನ್ ಗಳಿಸಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧ ಗಳಿಸಿದ ಶತಕ ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗಳಿಸಿದ ಮೊದಲ ಶತಕವಾಗಿದೆ.