ಚಿತ್ರದುರ್ಗ: ಕನ್ನಡವನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದ್ದು, ಜೊತೆಯಾಗಿ ದುಡಿಯೋಣ, ಜೊತೆಯಾಗಿ ಬೆಳೆಸೋಣ ಎಂದು ಸಾರಿಗೆ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಹೇಳಿದರು.
ಜಿಲ್ಲಾಡಳಿತದ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಸೋಮವಾರ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟçಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವ ಸಂದೇಶ ನೀಡಿದರು.
ಕನ್ನಡ ಎಂದರೆ ಪ್ರೀತಿ, ಕೀರ್ತಿ, ಶಕ್ತಿ, ಗೌರವ, ಹೆಮ್ಮೆ, ಹಿರಿಮೆ, ಉಸಿರಾಗಿದ್ದು, ಇದನ್ನು ಉಳಿಸಿ-ಬೆಳೆಸೋಣ. ಕವಿ ನಿಸಾರ್ ಅಹಮದ್ ಅವರು ಹೇಳುವ ಹಾಗೆ ಕನ್ನಡ ಉತ್ಸವ, ನಿತ್ಯೋತ್ಸವ ಆಗಲಿ ಎಂದು ಹಾರೈಸಿದರು.
ಹಿಂದಿ ಭಾಷೆ ನಂತರ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಕನ್ನಡಕ್ಕೆ ಲಭಿಸಿದೆ. ಇದು ಕನ್ನಡ-ಕರ್ನಾಟಕದ ಶ್ರೀಮಂತಿಕೆ ಶ್ರೇಷ್ಠತೆಯನ್ನು ತೋರುತ್ತದೆ. ಕಲ್ಯಾಣ ಕರ್ನಾಟಕ-ಕಿತ್ತೂರು ಕರ್ನಾಟಕದ ಮೂಲಕ ನಮ್ಮ ಸರ್ಕಾರ ಕನ್ನಡ ಕಂಪನ್ನು ಹೆಚ್ಚಿಸಿದೆ. ಸರ್ಕಾರದಿಂದ ಮಾತಾಡ್ ಮಾತಾಡ್ ಕನ್ನಡ ವಿಶೇಷ ಕಾರ್ಯಕ್ರಮ ನಡೆಯುತ್ತಿದೆ. ಕನ್ನಡ ಉಳಿಸಿ ಬೆಳೆಸಲು ನಾವು ಬದ್ಧ ಎಂದು ಹೇಳಿದರು.
ಯಾವುದೇ ಆಚರಣೆ ಆಗಲಿ, ಹಬ್ಬವಾಗಲಿ ಅದರದ್ದೇ ಆದ ಮಹತ್ವ, ವಿಶೇಷತೆ, ಹಿರಿಮೆ, ಗರಿಮೆಗಳು ಇರುತ್ತವೆ ಹಾಗೆಯೇ ಒಂದು ಹಬ್ಬ ಎಂದರೆ ಅದರ ಹಿಂದೆ ಹಲವು ದಂತಕಥೆಗಳೂ ಇರುತ್ತವೆ. ಇಂತಹ ದಂತಕಥೆಗಳ ಯಶೋಗಾಥೆಯೇ ನಮ್ಮ ಏಕೀಕರಣ ಚಳುವಳಿ ಮತ್ತು ಅಖಂಡ ಕರ್ನಾಟಕ ರಚನೆ ಎಂದು ಹೇಳಿದರು. ಕನ್ನಡ ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಹೋರಾಟ-ಕಿಚ್ಚು-ಸ್ವಾಭಿಮಾನ-ಅಭಿಮಾನಗಳ ದಂತಕಥೆಗಳನ್ನು ಸ್ಮರಿಸಿದರು.
ಆರ್.ಹೆಚ್.ದೇಶಪಾಂಡೆಯವರ ಹೋರಾಟ, ಆಲೂರು ವೆಂಕಟರಾಯರ ಕಿಚ್ಚು, ನಿಜಲಿಂಗಪ್ಪನವರ ಸ್ವಾಭಿಮಾನ ಹಾಗೂ ಜೆ.ಹೆಚ್.ಪಟೇಲರ ಕನ್ನಡ ಪ್ರೀತಿ ಅಭಿಮಾನದ ದಂತಕಥೆಗಳನ್ನು ಸಚಿವರು ಸ್ಮರಿಸಿದರು.

LEAVE A REPLY

Please enter your comment!
Please enter your name here